ಪೀರ್, ಮಹಮದ್
1896-1937. ಕನ್ನಡ ವೃತ್ತಿರಂಗಭೂಮಿಯ ಸುಪ್ರಸಿದ್ಧ ನಟ. ಮೈಸೂರಿನ ಮದ್ಯಮವರ್ಗದ ಮುಸಲ್ಮಾನ ಕುಟುಂಬವೊಂದರಲ್ಲಿ ಜನಿಸಿದ. ತಂದೆ ಪೈಲ್ವಾನ್ ಮೊಹಿಯುದ್ದೀನ್, ತಾಯಿ ಮುಬಾರಕ್‍ಬಿ. ಬಾಲ್ಯದಲ್ಲಿಯೇ ಮಾತಾಪಿತೃಗಳನ್ನು ಕಳೆದುಕೊಂಡ ಈತ ಸೋದರಮಾವನ ಆಶ್ರಯದಲ್ಲಿ ಬೆಳೆದ. ವೆಸ್ಲಿಯನ್ ಮಿಷನ್ ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗಲಿಂದಲೇ ನಾಟಕದಲ್ಲಿ ಅಭಿರುಚಿ ತೋರಿದ. ಅವಕಾಶ ದೊರೆತಾಗಲೆಲ್ಲ ತಪ್ಪದೆ ನಾಟಕಗಳನ್ನು ನೋಡುತ್ತಿದ್ದ ಈತನ ಮೇಲೆ ವರದಾಚಾರ್ಯ, ಕೃಷ್ಣಮೂರ್ತಿರಾಯ, ಬಳ್ಳಾರಿ ರಾಘವರ ಪ್ರಭಾವವಾಯಿತು. ನಾಟಕದ ಗೀಳಿನಿಂದ ವಿದ್ಯಾಭ್ಯಾಸ ಕುಂಠಿತವಾಯಿತು. ಮೈಸೂರಿನಲ್ಲಿಯೇ ಇದ್ದ ಗಿರಿಧರ್‍ಲಾಲ್ ಕಂಪನಿಗೆ ಕಾಲಿಟ್ಟ (1915). ಮೊದಲ ರಂಗಪ್ರವೇಶಗೊಳಿಸಿದ ಕೃಷ್ಣಲೀಲಾ ನಾಟಕದಲ್ಲಿ ಈತ ಕೈಗೊಂಡ ವಿಜಯನ (ಮಕರಂದ) ಪಾತ್ರ ಅಪಾರ ಮೆಚ್ಚುಗೆ ಗಳಿಸಿತು. ಇದೇ ಕಂಪನಿಯ ಇತರ ನಾಟಕಗಳಾದ ಕೃಷ್ಣ ತುಲಾಭಾರ, ಕೃಷ್ಣ ಪಾರಿಜಾತ, ಶನಿ ಪ್ರಭಾವ ಮೊದಲಾದವುಗಳಲ್ಲಿಯೂ ಈತ ವಿದೂಷಕ ಅಥವಾ ಇತರ ಪೋಷಕ ಪಾತ್ರಗಳಲ್ಲಿಯೂ ಕಾಣಿಸಿಕೊಂಡ. ಮೊದಮೊದಲಲ್ಲಿ ಹಾಸ್ಯ ಪಾತ್ರಾಭಿನಯವೇ ಹೆಚ್ಚು. ಇದರಲ್ಲಿ ಲಕ್ಷ್ಮಣ್‍ರಾವ್ ಪೂರಿ ಹಾಗೂ ಕೃಷ್ಣಮೂರ್ತಿರಾಯರೇ ಇವನ ಆದರ್ಶ. 1920 ರಲ್ಲಿ ಈ ಸಂಸ್ಥೆಯನ್ನು ಬಿಟ್ಟು ಬೆಂಗಳೂರಿಗೆ ಹೋಗಿ ಗುರುಕಾರ್ ಕಂಪನಿ ಎಂದು ಪ್ರಸಿದ್ಧವಾಗಿದ್ದ ನಟಭಯಂಕರ ಗಂಗಾಧರ ರಾಯರ ಭಾರತ ಜನ ಮನೋಲ್ಲಾಸಿನಿ ಎಂಬ ನಾಟಕ ಕಂಪನಿಗೆ ಸೇರಿ ಎಂಟು ವರ್ಷ ದುಡಿದ. ಕಾಳಿದಾಸದಲ್ಲಿ ಕುರುಬ, ಸದಾರಮೆಯಲ್ಲಿ ಕಳ್ಳ, ಪ್ರಭಾಮಣಿ ವಿಜಯದಲ್ಲಿ ವಿರೋಚನ, ಸುಭದ್ರಾದಲ್ಲಿ ಬ್ರಾಹ್ಮಣ ಇಂಥ ಹಾಸ್ಯ ಪಾತ್ರಗಳು ಇವನ ಪಾಲಿನವು. ಹಿರಿಯರಾದ ಗಂಗಾಧರ ರಾಯರಿಂದಲೂ ಇವನ ಸಲಹೆಗಳಿಗೆ ಮಾನ್ಯತೆ ದೊರಕಿತು. ನಟನಾಗಿ ಬಂದ ಪೀರ್ ಈ ಕಂಪನಿಯ ಸಲಹೆಗಾರನಾಗಿ ಕಾರ್ಯದರ್ಶಿಯಾಗಿ, ಸ್ಟೇಜ್ ಮ್ಯಾನೇಜರ್ ಆಗಿ ಕೊನೆಗೆ ಕಂಪನಿಯ ಮ್ಯಾನೇಜರ್ ಆದ. ವೈಯಕ್ತಿಕ ಕಾರಣಗಳಿಂದ ಈ ಕಂಪನಿ ತೊರೆದು ಸ್ವಲ್ಪ ಕಾಲ ಎನ್. ಸುಬ್ಬಣ್ಣನವರ ಕಂಪನಿಯಲ್ಲಿದ್ದ. ಕೆಲವು ಸಹನಟರ ಸಹಕಾರದಿಂದ 1932 ರಲ್ಲಿ ಚಂದ್ರಕಲಾ ನಾಟಕ ಮಂಡಳಿಯನ್ನು ಸ್ಥಾಪಿಸಿದ. ಐದೂವರೆ ವರ್ಷಗಳ ಕಾಲ ಅಸ್ತಿತ್ವದಲ್ಲಿದ್ದ ಈ ಸಂಸ್ಥೆ ಪೀರನ ನೇತೃತ್ವದಲ್ಲಿ ಸಾಧಿಸಿದ ಕಲಾಸಿದ್ಧಿ ಅಸಾಮಾನ್ಯ. ಈ ಕಂಪನಿಯ ಮೊದಲ ಪ್ರಯೋಗ ದ್ವಿಜೇಂದ್ರಲಾಲ್ ರಾಯರ ಷಾಜಹಾನ್ ಅದ್ಭುತ ಜನಪ್ರಿಯತೆ ಪಡೆಯಿತು. ಒಂಬತ್ತು ದಿನಗಳು ಅದೇ ನಾಟಕ ಎಡೆಬಿಡದೆ ಪ್ರದರ್ಶಿತವಾಯಿತು. ಸಿಂಹರ ಸಂಸಾರನೌಕೆ (1932), ಪುಟ್ಟಸ್ವಾಮಯ್ಯನವರ ಗೌತಮಬುದ್ಧ (1934) ಎಂಬ ಹೊಸಬಗೆಯ ನಾಟಕಗಳನ್ನು ಈ ಮಂಡಲಿ ಆಡಿತು. ಈ ಮೂರು ವಿಶಿಷ್ಟ ನಾಟಕಗಳಲ್ಲದೆ ಪ್ರಭಾಮಣಿ ವಿಜಯ, ವೀರಸಿಂಹಚರಿತ್ರೆ, ಸದಾರಮೆ, ಸುಭದ್ರಾಪರಿಣಯ ಮೊದಲಾದ ಮಾಮೂಲು ನಾಟಕಗಳನ್ನು ಅಭಿನಯಿಸಲಾಗುತ್ತಿತ್ತು. ಸಂಸಾರ ನೌಕದ ಸುಂದರ, ಷಾಜಹಾನ್ ನಾಟಕದ ದಾರಾ, ಗೌತಮಬುದ್ಧ ನಾಟಕೊ ಗೌತಮ ಪಾತ್ರಾಭಿನಯ ವಿಶೇಷ ಖ್ಯಾತಿಗೆ ಪಾತ್ರವಾಗಿ ಪೀರನ ಹೆಸರು ಕನ್ನಡ ರಂಗಭೂಮಿಯ ಇತಿಹಾಸದಲ್ಲಿ ಚಿರಸ್ಥಾಯಿಯಾಯಿತು. ವರದಾಚಾರ್ಯ, ರಾಘವರಾದ ಮೇಲೆ ರಂಗಾಭಿನಯ ಕಲೆ ಪ್ರಖರವಾದದ್ದು ಪೀರನಿಂದಲೇ ಎಂದರೆ ಅತಿಶಯೋಕ್ತಿಯಲ್ಲ. ಕನ್ನಡ ರಾಘವ ಎಂದೇ ಪ್ರಸಿದ್ಧನಾದ ಪೀರನಿಗೆ 1935 ರಲ್ಲಿ ಹುಬ್ಬಳ್ಳಿಯಲ್ಲಿ ಮುದವೀಡು ಕೃಷ್ಣರಾಯರ ನೇತೃತ್ವದಲ್ಲಿ ನಾಟ್ಯ ಧುರಂದರ ಪ್ರಶಸ್ತಿ ದೊರಕಿತು.

ಐದೂವರೆ ಅಡಿ ಎತ್ತರ, ವಿಶಾಲ ಹಣೆ, ಅಗಲ ಕಣ್ಣುಗಳು, ಕಂಚಿನ ಕಂಠ, ಆಕರ್ಷಕ ಧ್ವನಿಯ ಪೀರನದು ಸರಳ ಸಾತ್ವಿಕ ಜೀವನ. ಪೀರನ ನಾಟಕಗಳಲ್ಲಿ ವೈಭವದ ರಂಗಸಜ್ಜಿಕೆ, ಡೌಲಿನ ವೇಷಭೂಷಣಗಳು ಇರುತ್ತಿರಲಿಲ್ಲ. ದಕ್ಷ ಅಭಿನಯ ಹಾಗೂ ಧ್ವನಿಪೂರ್ಣ ಸಂಭಾಷಣಾ ವೈಖರಿ ಇವನ ನಾಟಕಗಳ ಜೀವಾಳ. ನಾಟಕಗಳಲ್ಲಿ ಉದ್ದಕ್ಕೂ ಸಂಗೀತದ ಅಬ್ಬರವಿರುವುದಕ್ಕೆ ಈತನ ಪ್ರತಿಭಟನೆ ಇತ್ತು. ಹಿತಮಿತವಾದ ಸಂಗೀತವೇ ಸಾಕು. ಹಾಡುಗಳಿಂದ ಅನೇಕ ವೇಳೆ ನಾಟಕ ಓಟಕ್ಕೆ ಕುಂದು ಎಂದು ಇವನ ಅಭಿಪ್ರಾಯ. ಸಂಗೀತ ಪ್ರಧಾನ ನಾಟಕಗಳ ಮಹತ್ವ ಕಡಿಮೆಯಾಗಿದ್ದಾಗ, ಜನಪ್ರಿಯತೆ ಕುಂದುತ್ತಿದ್ದಾಗ, ಗದ್ಯಪ್ರಧಾನ ನಾಟಕವನ್ನು ಮೊದಲು ರಂಗದ ಮೇಲೆ ಯಶಸ್ವಿಯಾಗಿ ತಂದ, ಸಾಹಿತ್ಯಮೌಲ್ಯವುಳ್ಳ ಕೃತಿಗಳು ಅಭಿನಯ ಯೋಗ್ಯ ಎಂದು ತೋರಿಸಿದ ಕೀರ್ತಿ ಈತನಿಗೆ ಸಲ್ಲಬೇಕು.

ಬಿ.ಆರ್. ಪಂತುಲು, ಎಂ.ವಿ. ರಾಜಮ್ಮ, ಎಚ್.ಎಲ್.ಎನ್.ಸಿಂಹ, ರಾಮಚಂದ್ರಶಾಸ್ತ್ರಿ, ಎಂ.ಎಸ್. ಮಾಧವರಾವ್, ಡಿಕ್ಕಿ ಮಾಧವರಾವ್, ಜಯರಾವ್ ಮೊದಲಾದ ಖ್ಯಾತ ಕಲಾವಿದರು ಇವನ ಸಂಸ್ಥೆಯಲ್ಲಿದ್ದು, ನುರಿತವರು. ಎಲಿಫೆಂಟ್ ಬಾಯ್ ಎಂದು ಹಾಲಿವುಡ್ ಚಿತ್ರರಂಗದಲ್ಲಿ ಪ್ರಸಿದ್ಧಿಯಾದ ಮೈಸೂರು ಸಾಬು ಪೀರನ ವಂಶಸ್ಥ.

ಪ್ರಚಂಡ ಚಾಣುಕ್ಯ ಎಂಬ ಇನ್ನೊಂದು ಉತ್ತಮ ನಾಟಕವೊಂದನ್ನು ಆಡಲು ಸಿದ್ಧತೆ ನಡೆಸುತ್ತಿರುವಂತೆಯೇ 1937 ರಲ್ಲಿ ಪೀರ್ ಹಠಾತ್ತನೆ ನಿಧನ ಹೊಂದಿದ.							    (ಎಸ್.ಎಸ್.ಎಂ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ